ಭಾರತೀಯ ಪತ್ರಿಕಾ ಪ್ರಕಟಣೆಯ ಆರಂಭ(Early Indian Newspapers)
ವಿಲಿಯಂ ಬೋಲ್ಟ್
![]() |
Photo Courtesy : Web Source |
ಭಾರತೀಯ ಪತ್ರಿಕೋದ್ಯಮ
ಇತಿಹಾಸದಲ್ಲಿ ಪತ್ರಿಕೆಯ ಪ್ರಕಟಣಾ ಇತಿಹಾಸವನ್ನು ಅವಲೋಕಿಸಿದರೆ ವಿಲಿಯಂ ಬೋಲ್ಟ್‍ನ ಹೆಸರು ಪ್ರಪ್ರಥಮವಾಗಿ
ಕೇಳಿಬರುತ್ತದೆ. ವಿಲಿಯಂ ಬೋಲ್ಟ್ ಮೂಲತಃ ವ್ಯಾಪಾರಿ
ಮತ್ತು ಬ್ರಿಟೀಷ ಈಸ್ಟ್ ಇಂಡಿಯಾ ಕಂಪನಿಯ ಉದ್ಯೋಗಿಯಾಗಿದ್ದನು. ಈತ ತನ್ನ “ಕನ್ಸಿಡರೇಷನ್ಸ್
ಆನ್ ಇಂಡಿಯಾ ಅಫೇರ್ಸ್” ಪುಸ್ತಕದಿಂದ ಹೆಚ್ಚು ಪ್ರಖ್ಯಾತನು. ಈ ಪುಸ್ತಕದಲ್ಲಿ ಬೆಂಗಾಲ್‍ನ ಮೂಲ ಮತ್ತು ಪ್ಲಾಸಿ ಕದನ-1757ರ
ತರುವಾಯ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಬೆಂಗಾಲ್‍ನ್ನು ಯಾವ ರೀತಿ ಅಸ್ತ್ರವಾಗಿಸಿಕೊಂಡರು ಮತ್ತು
ಬೆಂಗಾಲ್‍ನಲ್ಲಿ ಬ್ರಿಟೀಷರ ಆಡಳಿತದ ಸ್ವರೂಪವನ್ನು ವಿವರಿಸುತ್ತಾನೆ. ಅದು ಕ್ರಿ.ಶ. 1776 ಸೆಪ್ಟೆಂಬರ್‍ನಲ್ಲಿ ಕಲ್ಕತ್ತಾದ “ಕೌನ್ಸಿಲ್
ಹೌಸ್”ನ ಹೆಬ್ಬಾಗಿಲಿನ ಮೇಲೆ ಈ ರೀತಿಯಾದ ಒಂದು ಸೂಚನಾ ಪತ್ರವನ್ನು ಅಂಟಿಸಲಾಗಿತ್ತು:
![]() |
Council House Street Photo Courtesy : Web Source |
“ಸಾರ್ವಜನಿಕರಲ್ಲಿ ವಿನಂತಿ, ಈ ನಗರದಲ್ಲಿ ಮುದ್ರಣಾಲಯವಿಲ್ಲದೆ ಇರುವುದರಿಂದ
ವ್ಯಾಪಾರಸ್ಥರಿಗೆ ಮತ್ತು ಇತರ ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗಿರುವುದನ್ನು ಮನಗಂಡು, ವಿ.ಬೋಲ್ಟ್
ಎಂಬುವರು ಜನರಿಗೆ ತಿಳಿಸಲು ಈ ವಿಧಾನವನ್ನು ಅನುಸರಿಸಿದ್ದಾರೆ. ಪ್ರತಿಯೊಬ್ಬ ಬ್ರಿಟಿಷ್ ಪ್ರಜೆಗೂ ಸಮಾಚಾರಗಳು ತಿಳಿಯುವುದು
ಅತ್ಯಾವಶ್ಯಕವಾಗಿರುವುದರಿಂದ, ಮುದ್ರಣ ಕಲೆಯಲ್ಲಿ ಅಭಿಲಾಷೆಯಿರುವವರಿಗೆಲ್ಲಾ ಅವನು ಪ್ರೋತ್ಸಾಹ ಕೊಡಲು
ಸಿದ್ದನಿದ್ದಾನೆ. ಹೊಸ ಮುದ್ರಣಾಲಯವನ್ನು ಸ್ಥಾಪಿಸುವುದರಲ್ಲಿಯೂ,
ಅಚ್ಚಿನ ಮೊಳೆ ಹೊಂದಿಸಿಕೊಡುವುದರಲ್ಲಿಯೂ ಸಹಾಯ ಮಾಡುತ್ತಾನೆ. ಈ ಮಧ್ಯೆ ತನ್ನ ಹತ್ತಿರ ಕೆಲವು ಮುಖ್ಯ ಸುದ್ದಿಗಳು ಇರುವುದಾಗಿಯೂ
ಅವು ಪ್ರತಿಯೊಬ್ಬ ವ್ಯಕ್ತಿಗೂ ಬಹು ಮುಖ್ಯವಾಗಿ ತಿಳಿಯಬೇಕಾಗಿರುವುದರಿಂದ, ಯಾರು ಬೇಕಾದರೂ ಬೋಲ್ಟ್‍ನ
ಮನೆಗೆ ಬಂದು ಆ ಸುದ್ದಿಗಳನ್ನು ಓದಬಹುದು, ಅಥವಾ ಬರೆದುಕೊಂಡು ಹೋಗಿ ಒಳ್ಳೆಯ ಉದ್ದೇಶ ಸಾಧನೆಗಳಿಗಾಗಿ
ಉಪಯೋಗಿಸಬಹುದು. ಸಮಾಚಾರಗಳನ್ನು ಒದಲು ಇಷ್ಟವುಳ್ಳವರು
ಪ್ರತಿದಿನ ಬೆಳಿಗ್ಗೆ ಹತ್ತು ಗಂಟೆಯಿಂದ 12 ಗಂಟೆಯ ವಿರಾಮದಲ್ಲಿ ಬರಬಹುದು.” “ಮೂಲ:ಭಾರತೀಯ ಪತ್ರಿಕೋದ್ಯಮ, ನಾಡಿಗ ಕೃಷ್ಣಮೂರ್ತಿ,
ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ, 1961(ಪು.ಸಂ.:17).”
ಪ್ರಪ್ರಥಮವಾಗಿ 1776ರಲ್ಲಿ ಪತ್ರಿಕೆಯನ್ನು ಪ್ರಕಟಿಸಿದ್ದು ಇದು ಹೆಚ್ಚು
ಪ್ರಖ್ಯಾತಿಯನ್ನು ಪಡೆದುಕೊಳ್ಳಲಿಲ್ಲ. ಅದಕ್ಕೆ ಪ್ರಮುಖ ಕಾರಣ ಈ ಪತ್ರಿಕೆ ಕೈಬರಹದೊಂದಿಗೆ ಪ್ರಕಟಗೊಳ್ಳುತ್ತಿತ್ತು
ಮತ್ತು ಪತ್ರಿಕೆಯನ್ನು ಓದುವ ಆಸಕ್ತರು ಬೋಲ್ಟ್‍ನ ಮನೆಗೆ ಬಂದು ಓದಬೇಕಿತ್ತು. ಈ ಪತ್ರಿಕೆಯಲ್ಲಿ ಪ್ರಚಲಿತ
ವಿಷಯಗಳಿಗೆ ಮತ್ತು ಪ್ರಸ್ತುತ ಆಡಳಿತದ ವಿಷಯಗಳಿಗೆ ಹೆಚ್ಚಿನ ಪ್ರಧಾನ್ಯತೆ ಕೊಡಲಾಗಿತ್ತು. ಬ್ರಿಟೀಷ ಆಡಳಿತದ ಒಳ-ಹೊರಗಳನ್ನು ಆಳವಾಗಿ ಅರಿತಿದ್ದ ಬೋಲ್ಟ್‍ನ
ಪತ್ರಿಕಾ ಪ್ರಯತ್ನಕ್ಕೆ ಬ್ರಿಟೀಷ್ ಸರ್ಕಾರದ ಕೆಲ ಚತುರು ಅಧಿಕಾರಿಗಳು ಸರ್ಕಾರಕ್ಕೆ ಮುಂಬರುವ ಸಮಸ್ಯೆಯನ್ನು
ಅವಲೋಕಿಸಿ ಪತ್ರಿಕೆಗೆ ವಿರೋಧವನ್ನು ಪ್ರದರ್ಶಿಸಿ ಆತನನ್ನು ಗಡಿಪಾರು ಮಾಡಿದರು. ಈ ಮೂಲಕ ಪ್ರಪ್ರಥಮ ಪತ್ರಿಕಾ ಪ್ರಕಟಣೆಯ ಪ್ರಯತ್ನ ವಿಫಲವಾಯಿತು.
ಜೇಮ್ಸ್ ಅಗಷ್ಟಸ್ ಹಿಕ್ಕಿ
: ದಿ ಬೆಂಗಾಲ್ ಗೆಜೆಟ್
![]() |
Photo Courtesy : Web Source |
ಜೇಮ್ಸ್ ಅಗಷ್ಟಸ್
ಹಿಕ್ಕಿ ಮೂಲತಃ ಐರಿಷ್ ಪ್ರಜೆ. ಭಾರತೀಯರಿಗೆ ಪ್ರಪ್ರಥಮವಾಗಿ
ಪತ್ರಿಕೆಗಳನ್ನು ಪರಿಚಯಿಸಿದ ಕೀರ್ತಿ ಹಿಕ್ಕಿಗೆ ಸಲ್ಲುತ್ತದೆ. ಆ ಕಾರಣಕ್ಕಾಗಿಯೇ ಜೇಮ್ಸ್ ಅಗಸ್ಟಸ್ ಹಿಕ್ಕಿಯನ್ನು ‘ಭಾರತೀಯ
ಪ್ರತಿಕೋದ್ಯಮದ ಪಿತಾಮಹ’ ಎನ್ನುವರು. ಹಿಕ್ಕಿ ಜನವರಿ
1, 1780ರಲ್ಲಿ ಭಾರತದ ಪ್ರಪ್ರಥಮ ಪತ್ರಿಕೆ ‘ದಿ ಬೆಂಗಾಲ್
ಗೆಜೆಟ್’ಯನ್ನು ಬೆಂಗಾಲ್‍ನ ಕೊಲ್ಕತ್ತದಲ್ಲಿ ಪ್ರಾರಂಭಿಸಿದ. ಇದನ್ನು ‘ದಿ
ಕಲ್ಕತ್ತಾ ಜನರಲ್ ಅಡ್ವರ್ಟೈಸರ್’ ಎಂತಲೂ ಕರೆಯಲಾಗುತ್ತಿತ್ತು. ‘ಹಿಕ್ಕಿಯ ಬೆಂಗಾಲ್ ಗೆಜೆಟ್ ಎಂತಲೇ ಹೆಚ್ಚಿನ ಪ್ರಖ್ಯಾತಿಯನ್ನು
ಪಡೆದುಕೊಂಡಿತ್ತು. ಹಿಕ್ಕಿ ಭಾರತಕ್ಕೆ ಆಗಮಿಸಿದ ನಂತರ
ಪತ್ರಿಕೆಯನ್ನು ಪ್ರಾರಂಭಿಸುವ ನಿರ್ದಾರ ಕೈಗೊಳ್ಳುತ್ತಾನೆ. ನಂತರ 1780ರಲ್ಲಿ ಬ್ರಿಟೀಷ್ ಸರ್ಕಾರಕ್ಕೆ ಕೋಲ್ಕತ್ತಾನಲ್ಲಿ
ಪತ್ರಿಕೆಯನ್ನು ಪ್ರಾರಂಭಿಸುವ ಒಂದು ಕೋರಿಕೆಯನ್ನು ಇಂಗ್ಲೆಂಡ್‍ಗೆ ರವಾನಿಸುತ್ತಾನೆ. ಅತೀ ಕಡಿಮೆ ಸಮಯದಲ್ಲಿ ಅನುಮತಿಯನ್ನೂ ಸಹ ಪಡೆದುಕೊಳ್ಳುವುದರ
ಜೋತೆಗೆ ಭಾರತದಲ್ಲಿ ಪತ್ರಿಕೋಧ್ಯಮ ಕೃಷಿಯನ್ನು ಹಿಕ್ಕಿ ಆರಂಭಿಸುತ್ತಾನೆ. ಬೆಂಗಾಲ್ ಗೆಜೆಟ್ ಕಲ್ಕತ್ತಾದ ವಾರಪತ್ರಿಕೆಯಾಗಿತ್ತು. ಬ್ರಿಟೀಷ್ ಸರ್ಕಾರದ ಹಿರಿಯ ಅಧಿಕಾರಿಗಳ ವಯಕ್ತಿಕ ಜೀವನದ
ವಿಚಾರಗಳನ್ನು ಪ್ರಕಟಿಸಿದ ಸಲುವಾಗಿ ಹಿಕ್ಕಿ ಸರ್ಕಾರದಿಂದ ಹಲವಾರು ರೀತಿಯಲ್ಲಿ ಕಿರುಕುಳವನ್ನು ಅನುಭವಿಸಬೇಕಾಯಿತು. ಬ್ರಿಟೀಷ್ ಸರ್ಕಾರದ ತಪ್ಪುಗಳು ಮತ್ತು ಬ್ರಷ್ಟಾಚಾರದ ವಿರುದ್ದ
ಕಾವಲುಗಾರನಂತೆ ಕೆಲಸ ನಿರ್ವಹಿಸಿದ ಕೀರ್ತಿ ಬೆಂಗಾಲ್ ಗೆಜೆಟ್‍ನದ್ದು.
![]() |
Photo Courtesy : Web Source |
ಬೆಂಗಾಲ್ ಗೆಜೆಟ್‍ನ
ಬರವಣಿಗೆ, ಸಂಪಾಧನೆ ಮತ್ತು ಮುದ್ರಣದ ಜವಾಬ್ದಾರಿಯನ್ನು ಹಿಕ್ಕಿಯೇ ನಿರ್ವಹಿಸುತ್ತಿದ್ದನು. ಇದರ ಪ್ರಸರಣ ಸಂಖ್ಯೆ 200 ಪ್ರತಿಗಳಷ್ಟಿತ್ತು. ಈ ಪತ್ರಿಕೆಯ ಅಳತೆ 12” ಉದ್ದ X 8” ಅಗಲ, ಎರಡು ಪುಟಗಳು
ಮತ್ತು ಮೂರು ಕಾಲಮ್‍ಗಳನ್ನು ಹೊಂದಿದ್ದ ಪತ್ರಿಕೆ ಇದಾಗಿತ್ತು. ಜಾಹಿರಾತುಗಳಿಗೆ ಹೆಚ್ಚಿನ ಸ್ಥಳಾವಕಾಶವನ್ನು
ಕೊಡಲಾಗಿತ್ತು. ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳಿಗೂ
ಕೂಡಾ ಹೆಚ್ಚಿನ ಪ್ರಾಶಸ್ಥ್ಯೆವನ್ನು ಹಿಕ್ಕಿ ಕೊಟ್ಟಿದ್ದನು. ವಾರೆನ್
ಹೆಸ್ಟಿಂಗ್ಸ್ ಮತ್ತು ಮುಖ್ಯ ನ್ಯಾಯಾಧೀಶ ಎಲಿಜಾ
ಇಂಪೇರ ಖಾಸಗಿ ವಿಚಾರಗಳನ್ನು ಪ್ರಕಟಿಸಿದ ಕಾರಣಕ್ಕಾಗಿ ನ್ಯಾಯಾಂಗ ಬಂಧನವನ್ನು ಹಿಕ್ಕಿ ಎದುರಿಸಬೇಕಾಯಿತು. ಇದೇ ಕಾರಣಕ್ಕಾಗಿ ಬ್ರಿಟೀಷ್ ಸರ್ಕಾರ ಹಿಕ್ಕಿಯ ಪತ್ರಿಕೆಗೆ
ಕೊಟ್ಟ ಅಂಚೆ ಸೇವೆಯನ್ನು ಹಿಂಪಡೆದು ಪತ್ರಿಕೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು. ಈ ವಿಷಯವಾಗಿ ವಾರೆನ ಹೆಸ್ಟಿಂಗ್ಸ್ ಮಾಡಿದ ಆಜ್ಞೆಯ ವಿವರ
ಈ ಕೆಳಕಂಡಂತಿದೆ:
![]() |
Warren Hastings Photo Courtesy : Web Source |
![]() |
Elijah Impey Photo Courtesy : Web Source |
ಪೋರ್ಟ್ ವಿಲಿಯಂ, 14 ನವೆಂಬರ್
1980, “ಜೇಮ್ಸ್ ಅಗಸ್ಟಸ್ ಹಿಕ್ಕಿಯ ಸಂಪಾದಕತ್ವದಲ್ಲಿ
ಪ್ರಕಟವಾಗುತ್ತಿರುವ ಬೆಂಗಾಲ್ ಗೆಜೆಟ್ ಅಥವಾ ಕಲ್ಕತ್ತ ಅಡ್ವರ್ಟೈಸರ್ ಎಂಬ ಪತ್ರಿಕೆಯು ಖಾಸಗಿ ವ್ಯಕ್ತಿಗಳ
ಮೇಲೆ ಅಕ್ಷೇಪಕರವಾದ ಲೇಖನಗಳನ್ನು ಬರೆಯುತ್ತಿರುವುದು ಸರ್ಕಾರದ ಹಾಗೂ ಸಾರ್ವಜನಿಕರ ಗಮನಕ್ಕೆ ಬಂದಿರುವುದರಿಂದ
ಆ ಪತ್ರಿಕೆಯು ಟಪಾಲ್ ಕಚೇರಿಯ ಮುಖಾಮತರ ರವಾನಿಸಲು ಕೊಡಲ್ಪಟ್ಟಿದ್ದ ಸೌಲಭ್ಯಗಳನ್ನು ಸರ್ಕಾರವು ಕಿತ್ತುಹಾಕಿದೆ.”
“ಮೂಲ:ಭಾರತೀಯ ಪತ್ರಿಕೋದ್ಯಮ, ನಾಡಿಗ ಕೃಷ್ಣಮೂರ್ತಿ,
ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ, 1961(ಪು.ಸಂ.:20).”
ಇದ್ಯಾವುದಕ್ಕೂ ಜಗ್ಗದೇ ಸೆರೆಮನೆ ವಾಸದಲ್ಲಿಯೂ ಕೂಡಾ ತನ್ನದೇ ಆದ ವಸ್ತುನಿಷ್ಠ
ಮತ್ತು ನೇರ ಬರವಣಿಗೆಯನ್ನು ನಿಲ್ಲಿಸದೇ ಅಧಿಕಾರಿಗಳ ಬ್ರಷ್ಟಾಚಾರವನ್ನು ಹೊರಗೆಳೆದು ನಿಷ್ಟೂರ ಬರವಣಿಗೆಯಿಂದ
ಪ್ರಕಟಿಸಿದನು. ಸೆರೆಮನೆಯಲ್ಲಿದ್ದುಕೊಂಡೆ ಪ್ರಕಟಿಸಿದ
ಪತ್ರಿಕೆಯಲ್ಲಿ ಒಂದು ದಿನ ಈ ರೀತಿಯಾಗಿ ಹೇಳಿದ್ದನು:
“ಸಾರ್ವಜನಿಕರಿಗೂ ಮತ್ತು ನನ್ನ ಸ್ನೇಹಿತರಿಗೂ ಒಂದು ಮುಖ್ಯವಾದ ಸುದ್ದಿಯನ್ನು
ತಿಳಿಸುವುದು ನನ್ನ ಕರ್ತವ್ಯವೆಂದು ಭಾವಿಸುತ್ತೇನೆ.
ಅದೇನೆಂದರೆ, ಕಳೆದ ಗುರುವಾರ ರಾತ್ರಿ ಒಂದು ಮತ್ತು ಎರಡು ಗಂಟೆಯ ಸಮಯದಲ್ಲಿ ಮೂರ್‍ಮನ್‍ನ
ಸಹಾಯದೊಂದಿಗೆ ಇಬ್ಬರು ಶಸ್ತ್ರ ಸಜ್ಜಿತ ಯೂರೋಪಿಯನ್ ಸೈನಿಕರು ನನ್ನನ್ನು ಕೊಲ್ಲಲು ಪ್ರಯತ್ನ ನಡೆಸಿದರು.”
ಸ್ವಿಡನ್‍ನ ಧರ್ಮಗುರು ಜಾನ್ ಜೆಕೇರಿಯಾ ಕಿರಿಯಾಂಡರ್‍ನ
ಬಗ್ಗೆ ಟೀಕೆಗಳು ಮತ್ತು ಅಧಿಕಾರಿಗಳ ವಿರುದ್ದದ ಅಂಕಣ ಬರವಣಿಗೆ ಆಪಾಧನೆ ಹಿನ್ನೆಲೆಯಲ್ಲಿ ಹಿಕ್ಕಿಯ
ಮುದ್ರಣ ಕಛೇರಿಗೆ 400 ಜನ ಭದ್ರತಾ ಸಿಬ್ಬಂದಿ ದಾಳಿ ಮಾಡಿ ಕಛೇರಿಯನ್ನು ದ್ವಂಸಗೊಳಿಸಿದರು ಮತ್ತು
ಹಿಕ್ಕಿಯನ್ನು ಬಂಧಿಸಿ 80,000 ರೂಪಾಯಿ ಬೇಲ್‍ನ್ನು ವಿಧಿಸಿದರು. ಅದನ್ನು ಕೊಡಲಾಗದೆ ಹಿಕ್ಕಿ ಅಸಹಾಯಕನಾದನು. ಮತ್ತು ತೀವ್ರ ಅನಾರೊಗ್ಯದ ತೊಂದರೆಯಿಂದ ಹಿಕ್ಕಿ ಅಸು ನೀಗಿದನು
ಎಂಬುದನ್ನು ಬಿಟ್ಟರೆ ಹಿಕ್ಕಿಯ ಮರಣದ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಹಿಕ್ಕಿ ತನ್ನ ಪತ್ರಿಕಾ ಪ್ರಯತ್ನದಿಂದ ಭಾರತೀಯರಿಗೂ ಕೂಡಾ
ಪತ್ರಿಕೆಗಳನ್ನು ಪ್ರಾರಂಭಿಸುವುದಕ್ಕೆ ಪ್ರಚೋದನೆಯನ್ನು ನೀಡಿದನು.
ಇಡಿಯಾ ಗೆಜೆಟ್ - ನವೆಂಬರ್
1781
ಇಂಡಿಯಾ ಗೆಜೆಟ್
ಪತ್ರಿಕೆಯನ್ನು ನಾಟಕ ಕಂಪನಿಯ ಮಾಲಿಕನಾದ ಬರ್ನಾರ್ಡ್ ಮೆಸ್ಸಿಂಕ್ ಮತ್ತು ಉಪ್ಪಿನ ವ್ಯಾಪಾರಿ ಪೀಟರ್
ರೀಡ್ ಎಂಬುವರು ನವೆಂಬರ್ 1781ರಲ್ಲಿ ಪ್ರಾರಂಭಿಸಿದರು.
ಪತ್ರಿಕೆಯನ್ನು ಪ್ರಾರಂಭಿಸುವ ಪ್ರಮುಖ ಉದ್ದೇಶ ತಮ್ಮ ವ್ಯಾಪಾರ ಅಭಿವೃದ್ಧಿಯಾಗಿತ್ತು. ಗವರ್ನರ್ ವಾರೆನ್ ಹೆಸ್ಟಿಂಗ್ಸ್‍ನ ಆಶಿರ್ವಾದವನ್ನು ಪಡೆದುಕೊಂಡ
ಪತ್ರಿಕೆಯಾಗಿತ್ತು. ಈ ಪತ್ರಿಕೆಯ ಪ್ರತಿಸ್ಪರ್ಧಿ
ಪತ್ರಿಕೆ ಹಿಕ್ಕಿಯ ಬೆಂಗಾಲ್ ಗೆಜೆಟ್ ಆಗಿತ್ತು. ಇಂಡಿಯಾ
ಗೆಜೆಟ್‍ನ ಪತ್ರಿಕಾ ಮುದ್ರಣಾಲಯಕ್ಕೆ ಸ್ವಿಡನ್‍ನ ಧರ್ಮಗುರು ಜಾನ್ ಝಕೇರಿಯಾ ಕಿರಿಯಾಂಡರ್ ಅಚ್ಚಿನ
ಮೊಳೆಗಳನ್ನು ಒದಗಿಸಿದ್ದನು. ಈ ಕಾರಣಕ್ಕಾಗಿಯೇ ಹಿಕ್ಕಿ
ಕಿರಿಯಾಂಡರ್‍ನ ವಿರುದ್ದ ಟೀಕೆಗಳನ್ನು ತನ್ನ ಪತ್ರಿಕೆಯಲ್ಲಿ ಪ್ರಕಟಿಸಿದ್ದನು. ಅದು ಅಲ್ಲದೆ ಇಂಡಿಯಾ
ಗೆಜೆಟ್ ಪತ್ರಿಕೆ ಸರ್ಕಾರದ ಪರವಾಗಿದೆ ಎನ್ನುವುದು ಕೂಡಾ ಹಿಕ್ಕಿಯ ಆಕ್ರೋಶಕ್ಕೆ ಕಾರಣವಾಗಿತ್ತು.
ದಿ ಹೆರಾಲ್ಡ್-1783
![]() |
Present The Herald Photo Courtesy : Web Source |
ಜಾನ್ ಮೆನಾನ್ಸ್
ಈ ಪತ್ರಿಕೆಯನ್ನು 1783ರಲ್ಲಿ ಪ್ರಾರಂಭಿಸಿದನು. ಇದು
ವಾರ ಪತ್ರಿಕೆಯಾಗಿತ್ತು. ಮೆನಾನ್ ಕೊನೆಯ ವೇಳೆಯ ಸುದ್ದಿಗಳಿಗಾಗಿ
ಸ್ಥಳವನ್ನು ಕಾಯ್ದಿರಿಸುವ ತಂತ್ರ ಅನುಸರಿಸಿದ್ದನು.
1802ರಲ್ಲಿ ಈ ಪತ್ರಿಕೆಯನ್ನು ಬೆಂಜಮಿನ್ ಮ್ಯಾಥಿ ಮತ್ತು ಡಾ.ಜೇಮ್ಸ್ ಮ್ಯಾಕ್ ನೇಯರ್‍ಗೆ
ಮಾರಾಟ ಮಾಡಲಾಯಿತು. 1858ರಿಂದ ಈ ಪತ್ರಿಕೆ ದಿನಪತ್ರಿಕೆಯಾಗಿ
ಪ್ರಕಟಗೊಳ್ಳುತ್ತಿದೆ. ಪ್ರಸ್ತುತ ಕೂಡಾ ದಿ ಹೆರಾಲ್ಡ್
ನ್ಯೂಸ್ ಕ್ವೆಸ್ಟ್ ಮಿಡಿಯಾ ಗ್ರುಪ್ ಅಧೀನದಲ್ಲಿ ದಿನಪತ್ರಿಕೆಯಾಗಿ ಸಂಯುಕ್ತ ಸಂಸ್ಥಾನದ ಸ್ಕಾಟಲ್ಯಾಂಡ್‍ನಿಂದ
ಪ್ರಕಟಗೊಳ್ಳುತ್ತಿದೆ. ಈ ಪತ್ರಿಕೆಯ ಪ್ರಸ್ತುತ ಪ್ರಸರನ
ಸಂಖ್ಯೆ 28,900 ಆಗಿದೆ ಮತ್ತು ಆನ್‍ಲೈನ ಬಳಕೆದಾರರ ಸಂಖ್ಯೆ 41 ಮಿಲಿಯನ್‍ಗಳಷ್ಟು ಇದೆ.
ಕಲ್ಕತ್ತ ಗೆಜೆಟ್-ಓರಿಯಂಟಲ್
ಅಡ್ವರ್ಟೈಸರ್-1784
ಕಲ್ಕತ್ತ ಗೆಜೆಟ್-ಓರಿಯಂಟಲ್
ಅಡ್ವರ್ಟೈಸರ್ ಪತ್ರಿಕೆ ಮಾರ್ಚ 4, 1784ರಂದು ಪ್ರಥಮ ಸಂಚಿಕೆಯನ್ನು ಪ್ರಕಟಿಸಿತು. ಈ ಪತ್ರಿಕೆ ಪೂರ್ಣ ಪ್ರಮಾಣದಲ್ಲಿ ಸರ್ಕಾರದ ಸಹಕಾರವನ್ನು
ಪಡೆದುಕೊಂಡಂತ ಪತ್ರಿಕೆಯಾಗಿತ್ತು. ಕಲ್ಕತ್ತ ಗೆಜೆಟ್‍ನ
ಪ್ರಮುಖ ಆಕರ್ಷಣೆ ಎಂದರೆ ಬೆಂಗಾಲಿ, ಪರ್ಷಿಯನ್ ಮತ್ತು ಇಂಗ್ಲೀಷ್ ಮೂರು ಭಾಷೆಗಳಲ್ಲಿ ಸುದ್ದಿಗಳು
ಮುದ್ರಣಗೊಳ್ಳುತ್ತಿದ್ದವು. ಸಾಮಾನ್ಯವಾಗಿ ಈ ಪತ್ರಿಕೆಯನ್ನು
ಸರ್ಕಾರಿ ಮುಖಪತ್ರ ಎಂದು ಕರೆಯಲಾಗುತ್ತಿತ್ತು. ಪ್ರಸ್ತುತ
ಕೂಡಾ ಕಲ್ಕತ್ತಾದಿಂದ ಸರ್ಕಾರಿ ಪತ್ರವಾಗಿ ಕಲ್ಕತ್ತ ಗೆಜೆಟ್ ಅಂತಲೇ ಪ್ರಕಟಗೊಳ್ಳುತ್ತಿದೆ. 1787ರವರೆಗೆ
ಸರ್ಕಾರಿ ಅಂಚೆ ವಿನಾಯತಿಯನ್ನು ಪಡೆದುಕೊಂಡಿತ್ತು.
ನಂತರ ಅಂಚೆ ವಿನಾಯಿತಿಯನ್ನು ಹಿಂಪಡೆಯಲಾಯಿತು.
1815ರ “ಗವರ್ನಮೆಂಟ್ ಗೆಜೆಟ್” ಪ್ರಾಂರಂಭದೊಂದಿಗೆ ಕಲ್ಕತ್ತ ಗೆಜೆಟ್ ಭವಿಷ್ಯತ್ತಿನ ಉಳಿವಿಕೆಯನ್ನು
ಕಳೆದುಕೊಂಡಿತು. ನಂತರ ಸಿಬ್ಬಂಧಿ ಮತ್ತು ಹಣಕಾಸಿನ
ತೊಂದರೆಯಿಂದಾಗಿ 1818ರಲ್ಲಿ ಪತ್ರಿಕೆಯನ್ನು ಕಲ್ಕತ್ತ ಮಾರ್ನಿಂಗ್ ಪೊಸ್ಟ್ ಪತ್ರಿಕೆಯ ಮಾಲಿಕನಾದ
ಮಿ.ಹ್ಯಾಟ್ಲಿಗೆ ಮಾರಾಟ ಮಾಡಬೇಕಾಯಿತು.
ಬೆಂಗಾಲ್ ಜರ್ನಲ್-ವೀಕ್ಲಿ
ಅಡ್ವರ್ಟೈಸರ್-1785
ಬೆಂಗಾಲ್ ಜರ್ನಲ್
ಪತ್ರಿಕೆಯನ್ನು ವ್ಯಾಪಾರಿಯಾದ ಥಾಮಸ್ ಜೋನ್ಸ್‍ನು ಮಾರ್ಚ 15, 1785ರಂದು ಪ್ರಾರಂಭಿಸಿದನು. ಜೋನ್ಸ್‍ನು ಪತ್ರಿಕೆಗೆ ಅಂಚೆ ವಿನಾಯಿತಿಯನ್ನು ನೀಡಬೇಕೆಂದು
ಸರ್ಕಾರಕ್ಕೆ ಪತ್ರದ ಮೂಲಕ ಕೇಳಿಕೊಂಡಿದ್ದನು ಮತ್ತು ಸರ್ಕಾರಿ ಜಾಹಿರಾತುಗಳನ್ನು ಉಚಿತವಾಗಿ ಮುದ್ರಿಸುವುದಾಗಿ
ಘೋಷಿಸಿದ್ದನು. 1791ರಲ್ಲಿ ವಿಲಿಯಂ ಡ್ಯೂಯನ್ ಈ ಪತ್ರಿಕೆಯ
ಸಂಪಾಧಕನಾದನು. ಅದು ಮರಾಠಾ ಯುದ್ದದ ಸಮಯ, ಆ ವೇಳೆಯಲ್ಲಿ
ಗವರ್ನರ್ ಜನರಲ್ ಲಾರ್ಡ್ ಕಾರ್ನವಾಲಿಸನ ಮರಣದ ಸುಳ್ಳು ಸುದ್ದಿಯನ್ನು ಪ್ರಕಟಿಸಿದ ಕಾರಣಕ್ಕಾಗಿ ಲಾರ್ಡ್
ಡ್ಯೂಯನ್ ಸಮಸ್ಯೆಯನ್ನು ಎದುರಿಸಬೇಕಾಯಿತು. ಡ್ಯೂಯನ್
ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದರೂ ಕೂಡಾ ಆತನನ್ನು ಗಡಿಪಾರು ಮಾಡಲಾಯಿತು.
ಓರಿಯಂಟಲ್ ಮ್ಯಾಗಜಿನ್ ಅಥವಾ
ಕಲ್ಕತ್ತಾ ಅಮ್ಯೂಸ್‍ಮೆಂಟ್-1785
ಗಾರ್ಡನ್ ಮತ್ತು
ಜಾನ್ ಹೇ ಎನ್ನುವರು ಈ ಓರಿಯಂಟಲ್ ಮ್ಯಾಗಜಿನ್ ಪತ್ರಿಕೆಯನ್ನು ಪತ್ರಿಕೆಯನ್ನು 1785ರಲ್ಲಿ ಪ್ರಾರಂಭಿಸಿದರು. ಇದು ಭಾರತದ ಪ್ರಪ್ರಥಮ ಮಾಸಿಕ ಪತ್ರಿಕೆಯಾಗಿದೆ. ಈ ಪತ್ರಿಕೆ ವಾರೆನ್ ಹೆಸ್ಟಿಂಗ್ಸ್‍ನ ಆಡಳಿತ ಮತ್ತು ಬ್ರಿಟಿಷ್
ಈಷ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳ ಉದ್ದೇಶಿತವಾಗಿ ಧನಾತ್ಮಕ ಸುದ್ದಿಗಳನ್ನು ಪ್ರಕಟಿಸುತ್ತಿತ್ತು. ರಾಜಕೀಯ ಒತ್ತಡ ಮತ್ತು ಗವರ್ನರ್ ಜನರಲ್ ವೆಲ್ಲೆಸ್ಲಿಯ ಹೊಸ
ಪತ್ರಿಕಾ ನೀತಿಯಿಂದಾಗಿ 1799ರಲ್ಲಿ ಸ್ಥಗಿತಗೊಂಡಿತು.
ಮದ್ರಾಸ್ ಕೋರಿಯರ್-1785
![]() |
Photo Courtesy : Web Source |
ರಿಚರ್ಡ್ ಜಾನ್ಸ್‍ಟನ್
ಈ ಪತ್ರಿಕೆಯನ್ನು ಅಕ್ಟೋಬರ್ 12, 1785ರಲ್ಲಿ ಪ್ರಾರಂಭಿಸಿದನು. ಇದರ ಪ್ರಥಮ ಸಂಪಾದಕರು ಹ್ಯೂ ಬಾಯ್ಡ್. ಇದು ಮದ್ರಾಸ್‍ನ ಸರ್ಕಾರಿ ಪತ್ರಿಕೆಯ ಹಾಗೆ ಅವಕಾಶಗಳನ್ನು
ಪಡೆದುಕೊಂಡಂತ ಪತ್ರಿಕೆಯಾಗಿತ್ತು. ಈ ಪತ್ರಿಕೆ ಇಂಗ್ಲೀಷ್‍ನಲ್ಲಿ
ಪ್ರಕಟಗೊಳ್ಳುತ್ತಿತ್ತು. ಸರ್ಕಾರಿ ಸುದ್ದಿಗಳು ಮತ್ತು
ಸುತ್ತೋಲೆಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲು ಸರ್ಕಾರದ ಪರವಾನಿಗೆಯನ್ನು ಪಡೆದುಕೊಂಡಿತ್ತು. ಆ ಕಾರಣಕ್ಕಾಗಿ ಅಂಚೆ ವಿನಾಯತಿಯನ್ನು ಕೂಡಾ ಪಡೆದಿತ್ತು. ಈ ಪತ್ರಿಕೆ ನಾಲ್ಕು ಪುಟಗಳ ವಾರ ಪತ್ರಿಕೆಯಾಗಿತ್ತು ಮತ್ತು
ಇದರ ಬೆಲೆ ಒಂದು ರೂಪಾಯಿ ಇತ್ತು. ಪತ್ರಿಕೆಯ ಕೊನೆಯ
ಪುಟವನ್ನು ಜಾಹಿರಾತುಗಳು ಮತ್ತು ಚಿಕ್ಕ ಕವನಗಳಿಗೆ ಮೀಸಲಾಗಿರಿಸಿತ್ತು. ಪ್ರಾರಂಭದಲ್ಲಿ ಮುದ್ರಣಾಲಯಕ್ಕಾಗಿ ಅವಶ್ಯಕವಿರುವ ಯಂತ್ರ
ಮತ್ತು ಸಲಕರಣೆಗಳನ್ನು ಇಂಗ್ಲೆಂಡ್‍ನಿಂದ ತರಿಸಿಕೊಂಡಾಗ ಸರ್ಕಾರಿ ತೆರಿಗೆ ವಿನಾಯಿತಿಯನ್ನು ಕೂಡಾ
ಪಡೆದಿತ್ತು. 1786ರಲ್ಲಿ ಹ್ಯೂ ಬಾಯ್ಡ್ ಪತ್ರಿಕೆಯ
ಸಂಪಾಧಕನಾದನು. ಬ್ರಿಟಿಷ್ ಅಧಿಕಾರಿ ಲ್ಯಾಂಡನ್‍ನ
ವಿರುದ್ದ ಟೀಕಾಲೇಖನ ಪ್ರಕಟಿಸಿದ್ದಕ್ಕಾಗಿ ಹ್ಯೂ ಬಾಯ್ಡ್ ಈ ಪತ್ರಿಕೆಗೆ 1791ರಲ್ಲಿ ರಾಜಿನಾಮೆ ಕೊಡಬೇಕಾಯಿತು. ಅಷ್ಟಕ್ಕೂ ಪ್ರಕಟಿಸಿದ ಸುದ್ದಿ ಇಂಗ್ಲೀಷ್ ಪತ್ರಿಕೆಯಿಂದ
ತರ್ಜುಮೆ ಮಾಡಲಾಗಿತ್ತು.
ಮೂರು ದಶಕಗಳ ಕಾಲ ಮದ್ರಾಸ್ ಸಾಮ್ರಾಜ್ಯದಲ್ಲಿ ತನ್ನದೇ ಆದ ವಿಸ್ತಾರ ಓದುಗ
ಬಳಗವನ್ನು ಹೊಂದಿದ ಪತ್ರಿಕೆ ಮದ್ರಾಸ್ ಕೋರಿಯರ್.
231 ವರ್ಷ ಪ್ರಾಚೀನ ಪತ್ರಿಕೆಯನ್ನು ಆಕ್ಸಫರ್ಡ್ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಅಧ್ಯಯನ
ಮಾಡುತ್ತಿರುವ ಸಂಶೋಧನಾರ್ಥಿ ಶ್ರೇನಿಕ್ ರಾವ್ ಅಕ್ಟೋಬರ್ 12, 2016ರಲ್ಲಿ ಪುನರಾರಂಭಿಸಿದ್ದಾರೆ. ರಾವ್ ಮದ್ರಾಸ್ ಕೋರಿಯರ್‍ನ ಡಿಜಿಟಲ್ ಆವೃತ್ತಿಯನ್ನು ಪ್ರಕಟಿಸುತ್ತಿದ್ದಾರೆ. ರಾವ್‍ರ ಈ ಪುನರಾರಂಬಿತ ಪತ್ರಿಕೆಯ ಪ್ರಮುಖ ವಿಷಯಗಳೆಂದರೆ
ತಂತ್ರಜ್ಞಾನ, ಭದ್ರತೆ ಮತ್ತು ಅಂತರಾಷ್ಟ್ರೀಯ ಸಂಬಂಧಗಳಾಗಿವೆ.
ವಿಕ್ಲಿ ಮದ್ರಾಸ್ ಗೆಜೆಟ್-1795
ರಾಬರ್ಟ್ ವಿಲಿಯಮ್ಸ್
ಈ ಪತ್ರಿಕೆಯ ಸಂಸ್ಥಾಪಕ. ಮದ್ರಾಸ್ ಕೋರಿಯರ್‍ನ ಪ್ರತಿಸ್ಪರ್ಧಿ
ಪತ್ರಿಕೆ ಇದಾಗಿತ್ತು. ವಿಕ್ಲಿ ಮದ್ರಾಸ್ ಪತ್ರಿಕೆಯಲ್ಲಿ
ಸುದ್ದಿಗಳು ಇಂಗ್ಲೀಷ್ ಜೋತೆಗೆ ಇತರ ಪ್ರಾಧೇಶಿಕ ಭಾಷೆಯಲ್ಲಿಯೂ ಪ್ರಕಟಗೊಳ್ಳುತ್ತಿದ್ದವು. ಈ ಪತ್ರಿಕೆಯ ಆರಂಭ ಮದ್ರಾಸ್ ಕೋರಿಯರ್ ಪತ್ರಿಕೆಗೆ ಆತಂಕವನ್ನುಂಟು
ಮಾಡಿತ್ತು. ಆ ಕಾರಣಕ್ಕಾಗಿ ಮದ್ರಾಸ್ ಕೋರಿಯರ್ ಪತ್ರಿಕೆ
ಸರ್ಕಾರಕ್ಕೆ ಪತ್ರದ ಮೂಲಕ ಪ್ರಶ್ನಿಸಿತ್ತು. ಅದಕ್ಕಾಗಿ
ಸರ್ಕಾರ ತನ್ನ ಜಾಹಿರಾತುಗಳನ್ನು ಮತ್ತು ಪ್ರಕಟಣೆಗಳನ್ನು ಎರಡೂ ಪತ್ರಿಕೆಗಳಿಗೆ ಸಮಾನವಾಗಿ ಹಂಚಿಕೆ
ಮಾಡುವ ನಿರ್ಧಾರವನ್ನು ತೆಗೆದುಕೊಂಡಿತ್ತು.
ನಂತರ 1793 ಏಷಿಯಾಟಿಕ್
ಮಿರರ್(ಕಮರ್ಷಿಯಲ್ ಅಡ್ವರ್ಟೈಸರ್) ವಾರಪತ್ರಿಕೆ,
ಬಾಂಬೆ ಹೆರಾಲ್ಡ್-1786 ಮದ್ರಾಸ್‍ನ ಪ್ರಪ್ರಥಮ ಪತ್ರಿಕೆ, ಬಾಂಬೆ ಕೋರಿಯರ್-1790 ನಂತರ ಇದು
1838ರಲ್ಲಿ ಬಾಂಬೆ ಟೈಮ್ಸ್ ಆಗಿ ರಾಬರ್ಟ್ ನೈಟ್ ನಿಂದ ಮರು ನಾಮಕರಣವಾಯಿತು. ಇಂಡಿಯನ್ ವಲ್ಡ್-1795, ಟೆಲಿಗ್ರಾಫ್-1799, 1818ರಲ್ಲಿ
ಬೆಂಗಾಲಿಯ ಶ್ರೀರಾಂಪುರ್ ಪಾದ್ರಿಗಳ ಮಾಸ ಪತ್ರಿಕೆ ದಿಗ್‍ದರ್ಶನ್ ಮತ್ತು 1818ರ ಸಮಾಚಾರ ಧರ್ಪನ್
ಮತ್ತು ಪ್ರೆಂಡ್ ಆಫ್ ಇಂಡಿಯಾ ಪತ್ರಿಕೆಗಳು ಪ್ರಮುಖವಾದವುಗಳು.
ಕೆಲವು ಪ್ರಮುಖ ಪತ್ರಿಕೆಗಳು,
ಪ್ರಕಟಣಾ ದಿನ
ಕ್ರ.ಸಂ.
|
ಪತ್ರಿಕೆ
|
ಪ್ರಕಟಣಾ ದಿನ
|
01
|
ಇಂಡಿಯಾ ಗೆಜೆಟ್
|
ಸೋಮವಾರ
|
02
|
ಕಲ್ಕತ್ತ ಕ್ರಾನಿಕಲ್
|
ಮಂಗಳವಾರ
|
03
|
ಏಷಿಯಾಟಿಕ್ ಮಿರರ್
|
ಬುಧುವಾರ
|
04
|
ದಿ ಕಲ್ಕತ್ತ ಗೆಜೆಟ್
|
ಗುರುವಾರ
|
05
|
ದಿ ಬೆಂಗಾಲ್ ಗೆಜೆಟ್
|
ಶನಿವಾರ
|
06
|
ದಿ ರೆಕಾರ್ಡರ್
|
ಭಾನುವಾರ
|
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ